ಕುದ್ರೋಳಿಯ ಶ್ರೀಗೋಕರ್ಣನಾಥ ಕ್ಷೇತ್ರದ ವಿಶ್ವ ಬಿಲ್ಲವ ಮಹಿಳಾ ಸಂಘದ ಆರನೇ ವಾರ್ಷಿಕೋತ್ಸವ ‘ಚೈತನ್ಯ–2026’ ಕಾರ್ಯಕ್ರಮ ನಡೆಯಿತು. ಡಾ.ನಿಷ್ಮಾ ಪೃಥ್ವಿಮ್ ರಾಜ್ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಚೈತನ್ಯ’ ಎಂದರೆ ಉತ್ಸಾಹ. ಈ ಉತ್ಸಾಹದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದರು. ವಿದ್ಯಾರ್ಥಿವೇತನ ಎಂದರೆ ಕೇವಲ ಹಣದ ಸಹಾಯವಲ್ಲ ವಿದ್ಯಾರ್ಥಿಗಳ ಮೇಲಿನ ನಂಬಿಕೆ ಮತ್ತು ಅವರು ಉತ್ತಮ ಶಿಕ್ಷಣ ಪಡೆದು ಜೀವನದಲ್ಲಿ ಸಾಧಿಸಲಿ ಎಂಬ ಆಶಯದ ಪ್ರತೀಕವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಕೀಲೆ ಅಶ್ವಿನಿ ಸುವರ್ಣ ಮಾತನಾಡಿ, ಇದು ಕೇವಲ ವಾರ್ಷಿಕ ಕಾರ್ಯಕ್ರಮವಲ್ಲ, ಸಮಾಜದ ಭವಿಷ್ಯ ಹಾಗೂ ಜನರ ಸ್ವಾಭಿಮಾನವನ್ನು ಗೌರವಿಸುವ ವೇದಿಕೆಯಾಗಿದೆ ಎಂದರು.
ವಿಶ್ವ ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಉರ್ಮಿಳಾ ರಮೇಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಅರ್ಹ ಫಲಾನುಭವಿಗಳಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.


